IDEA - 19
ನರ್ಸರೀಸ್ ಆಫ್ ಟ್ಯಾಲೆಂಟ್
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠತ ವಿದ್ಯಾಸಂಸ್ಥೆಗಳಾದ ಐಐಟಿ, ಎನ್ ಐ ಟಿ, ಐಐಎಸ್ ಸಿ ಮತ್ತು ಎಐಎಂಎಸ್ ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲೆಂಬ ಉದ್ದೇಶದಿಂದ ಎಸ್ ವಿ ವೈ ಎಂ ಮತ್ತು ಕ್ವಾಲ್ಕಂ ಕಂಪನಿಯ ಸಹಯೋಗದೊಂದಿಗೆ ನರ್ಸರೀಸ್ ಆಫ್ ಟ್ಯಾಲೆಂಟ್ ಎಂಬ ಕಾರ್ಯಕ್ರಮವನ್ನು 2023-24 ನೇ ಸಾಲಿಂದ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಕ್ರಮೇತರ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಈ ಕಾರ್ಯಕ್ರಮವು ಆನ್ ಲೈನ ಮತ್ತು ನೇರ ತರಗತಿಗಳನ್ನು ಹೊಂದಿದ್ದು ವಿದ್ಯಾರ್ಥಿಗಳು ಮುಂದಿನ ಉನ್ನತ ವಿದ್ಯಾಭ್ಯಾಸವನ್ನು ಮೇಲ್ಕಾಣಿಸಿದ ವಿದ್ಯಾಸಂಸ್ಥೆಗಳಲ್ಲಿ ಪಡೆಯುವ ಹಂಬಲವನ್ನು ಹೆಚ್ಚಿಸಿಲಾಗಿದೆ.
IDEA - 18
IDEA - 17
ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮೀಕರಣ ರೇಡಿಯೋ ಕಾರ್ಯಕ್ರಮದಲ್ಲಿ ಗಣಿತ ವಿಷಯ ಸಂಬಂಧಿತ ಅನುಕೂಲಕಾರಿ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು ಹಾಗೂ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹಾರ ಮಾಡಲಾಯಿತು.
IDEA - 16
IDEA - 15
ಪ್ರೇರಣಾತ್ಮಕ ಸರ್ಕಾರಿ ಶಾಲೆಯ ಶಿಕ್ಷಕರ ಬೋಧನೋತ್ಸಾಹ
ಸರ್ಕಾರಿ ಶಾಲೆಗಳಿಂದು ಪ್ರಗತಿ ಹೊಂದುತ್ತಿರುವ ಹಲವಾರು ಆಯಾಮಗಳಗಳನ್ನು ನಾವಿಂದು ಕಾಣುತ್ತಿದ್ದೆವೆ. ಈ ದಿಶೆಯಲ್ಲಿ ಒಂದು ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಶಾಲೆಯ ಜೊತೆಗೆ ಇತರೆ ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ನಿಂತಾಗ ಒಳಿತು ಜಗಕ್ಕಲ್ಲದೆ ಮತ್ತೇನು? ಈ ದಿಶೆಯಲ್ಲಿ ಯೋಚಿಸಿದ ನಾವು ಸರ್ಕಾರಿ ಶಿಕ್ಷಕರೆಂಬುದು ನಮಗೆ ಹೆಮ್ಮೆಯ ವಿಷಯ. ಇತರೆ ಇಲಾಖೆಗಳಂತೆ ಶಿಕ್ಷಣ ಇಲಾಖೆಯಲ್ಲೂ ವರ್ಗಾಣೆಯೆಂಬುದು ಸಹಜ ಪ್ರಕ್ರಿಯೆ. ವರ್ಗಾವಣೆಯಲ್ಲಿ ಶಿಕ್ಷಕರು ತಮಗೆ ಅನುಕೂಲಿಸುವಂತಹ ಶಾಲೆಗಳನ್ನು ಆಯ್ದುಕೊಂಡು, ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ತೆರಳುವುದು ಅನಿವಾರ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಎದ್ದು ಕಾಣುವುದು ಸಹಜ. ಈ ಬಗೆಯ ಶಾಲೆಗಳ ಅನಾನುಕೂಲ ಪರಿಸ್ಥಿತಿಯಲ್ಲಿ ನಾವೇನು ಮಾಡಬಹುದು ಎಂದು ಯೋಚಿಸಿದಾಗ, ನಮಗೆ ತೋಚಿದ್ದೇ ಹೊಸದೊಂದು ಪ್ರಯೋಗ. ಶಿಕ್ಷಕರು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಶಾಲೆಗಳಲ್ಲಿ ಬೋಧಿಸುವುದು ಸೂಕ್ತವೆಂದು. ಈ ಬಾರಿಯ ದಸರಾ ರಜಾ ಸಮಯದಲ್ಲಿ ನಮ್ಮ ಗಮನದಲ್ಲಿ ಕಂಡುಬಂದತಹ ಶಾಲೆಯೆಂದರೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಂಚಿನಲ್ಲಿರುವ ಕೊಡಗು ಜಿಲ್ಲೆಯ ಕರಿಕೆ ಎಂಬ ಗ್ರಾಮ. ಸುಂದರ ಪ್ರಕೃತಿಯ ಪರ್ವತಶ್ರೇಣಿಗಳ ನಡುವೆ ಕರಿಕೆ ಗ್ರಾಮವು ಮೂಲತಃ ಕನ್ನಡ, ಮಲೆಯಾಳಂ ಮತ್ತು ಮರಾಠಿ ಭಾಷೆಗಳನ್ನಾಡುವ ಜನರಿಂದ ತುಂಬಿದೆ. ಈ ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಈ ವಿವಿಧ ಮಾತೃಭಾಷೆಯನ್ನಾಧರಿಸಿದ ವಿದ್ಯಾರ್ಥಿಗಳೆಂಬುದು ಸೋಜಿಗದ ಸಂಗತಿ. ಮೈಸೂರಿನ ಸರಗೂರು ತಾಲ್ಲೂಕಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಹಕಾರದೊಂದಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು 5 ದಿನಗಳ ಕಾಲ ಕಾರ್ಯ ಯೋಜನೆಯನ್ನು ಹಮ್ಮಿಕೊಂಡು ನಮ್ಮ ತಂಡವು ಕಲಿಕಾ ಪ್ರಕ್ರಿಯೆಯನ್ನು ಕೈಗೊಂಡಿತು.
ವಿದ್ಯಾರ್ಥಿಗಳಲ್ಲಿದ್ದ ಕಲಿಕಾ ಉತ್ಸಾಹವು ನಮ್ಮ ಬೋಧನೆಗೆ ಪ್ರೇರಣೆಯನ್ನು ತುಂಬಿತು. 8, 9 ಮತ್ತು 10ನೇ ತರಗತಿಗಳಿಗೆ ಸಂಬಂಧಿಸಿದಂತೆ ಅರ್ಧವರ್ಷಕ್ಕೆ ಸೀಮಿತವಾದ ಪಠ್ಯವಸ್ತುವಿಗೆ ಯೋಜನೆ ಮತ್ತು ವೇಳಾಪಟ್ಟಿಯನ್ನು ತಯಾರಿಸಿ, ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಕೈಗೊಂಡೆವು. ಅಗತ್ಯವಾದ ಡಿಜಿಟಲ್ ಸಂಪನ್ಮೂಲಗಳನ್ನು ಉಪಯೋಗಿಸಿ, ಪರಿಣಾಮ ಕಲಿಕೆಯನ್ನು ಹೊರತರುವ ಪ್ರಯತ್ನ ನಮ್ಮದಾಗಿತ್ತು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸ್ಪಂದನೆಯು ಶ್ಲಾಘನೀಯವಾದದ್ದು.
ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಬೋಧಿಸಲು ಆಗಮಿಸಿದ್ದ ನಮ್ಮ ತಂಡಕ್ಕೆ ಶಾಲಾ ಆಡಳಿತ ಮತ್ತು ಎಸ್.ಡಿ.ಎಂ.ಸಿ.ಯವರು ವಸತಿ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸಿದ್ದು, ಶಾಲೆಯ ಬಗೆಗಿನ ಅವರ ಕಾಳಜಿಯನ್ನು ತೋರಿಸುತ್ತಿತ್ತು. ಈ ಶಾಲೆಯ ಕಲಿಕೋತ್ಸಾಹಿ ಮಕ್ಕಳಿಗೆ ಬೋಧನೆಯನ್ನು ನೀಡಿ, ನಮ್ಮೂರಿಗೆ ಹಿಂದಿರುಗುವಾಗ ಸಾರ್ಥಕ ಭಾವವು ಎಂದೆಂದಿಗೂ ನಮ್ಮಲ್ಲಿ ಮನೆ ಮಾಡಿತ್ತು.
IDEA - 14
ವೈ-ಫೈ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯ
ನಾನು ಮತ್ತು ನನ್ನ ಇತರೆ ಶಿಕ್ಷಕ ಮಿತ್ರರು ಸೇರಿ ರಚಿಸಿದ ವಿಜ್ಞಾನ ಮತ್ತು ಗಣಿತ ವಿಷಯಗಳ ಡಿಜಿಟಲ್ ಸಂಪನ್ಮೂಲಗಳನ್ನು ರಾಸ್ಪ್ ಬೆರ್ರಿ ಸಾಧನದೊಳಗೆ ಅಳವಡಿಸಿ, ವೈ-ಫೈ ರೂಟರ್ ನ ಸಹಾಯದಿಂದ ಟ್ಯಾಬ್ಲೆಟ್ ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ತಂತ್ರಜ್ಞಾನವನ್ನು ನಮ್ಮ ಶಾಲೆಯಲ್ಲಿ ಕಲಿಕಾ ಸಂಪನ್ಮೂಲವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಕೈಗೊಳ್ಳಲು ನನಗೆ ಸಹಾಯಹಸ್ತವನ್ನು ಚಾಚಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಸರಗೂರು, ಮೈಸೂರು ಸಂಸ್ಥೆಯು 20 ಟ್ಯಾಬ್ಲೆಟ್ ಗಳನ್ನು ನೀಡಿದೆ. ಶಾಲೆಯ ಸುಸಜ್ಜಿತ ವೈ-ಫೈ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯವನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=OiVOWv6gy2k&t=33s
IDEA - 13
ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕೋಡಿಂಗ್ ತರಗತಿಗಳು
ವಿದ್ಯಾರ್ಥಿಗಳಿಗಾಗಿ ಪಾಠೋಪಚಾರದೊಂದಿಗೆ ಸಹಪಠ್ಯ ಚಟುವಟಿಕೆಯ ರೂಪದಲ್ಲಿ ನಾವಿನ್ಯಯುತವಾಗಿ ರಚಿಸಲ್ಪಟ್ಟ ಕೋಡಿಂಗ್ ತರಗತಿಗಳನ್ನು ಸ್ವ-ಇಚ್ಛೆಯಿಂದ ವಿದ್ಯಾರ್ಥಿಗಳಿಗಾಗಿ ಬೋಧಿಸುತ್ತಿದ್ದೇನೆ. ಪಠ್ಯ ಚಟುವಟಿಕೆಗಳೊಂದಿಗೆ ಅನೇಕ ನೂತನ ಪ್ರಯೋಗಗಳನ್ನು ಕೈಗೊಂಡಿರುತ್ತೇನೆ. ಮುಂದಿನ ತಂತ್ರಜ್ಞಾನ ಜಗತ್ತಿಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ತರಗತಿಗಳು ಅನುವು ಮಾಡಿಕೊಡುತ್ತಿದೆ. ಈ ಕಾರ್ಯಕ್ಕಾಗಿ ರೋಬೋ ಕಂಪಾಸ್ ಎಂಬ ಆನ್ ಲೈನ್ ಪೋರ್ಟಲನ್ನು ಉಪಯೋಗಿಸುತ್ತಿದ್ದೇನೆ. ವಿದ್ಯಾರ್ಥಿಗಳು ಹಲವಾರು ಪ್ರಾಜೆಕ್ಟ್ ಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ನನ್ನೊಡನೆ ಹಂಚಿಕೊಳ್ಳುತ್ತಿದ್ದಾರೆ. ಕೋಡಿಂಗ್ ತರಗತಿಯ ವೀಡಿಯೋವನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.
IDEA - 12
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಉಚಿತ ಆನ್ ಲೈನ್ ತರಗತಿಗಳು
IDEA - 11
ಚಿತ್ರಗಳ ಭಂಡಾರ
ಅಂತರ್ಜಾಲದಲ್ಲಿ ಯಾವುದೇ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದಲ್ಲಿ
ಹಲವಾರು ಹಕ್ಕುಸ್ವಾಮ್ಯಗಳನ್ನು ನಾವು ಪಾಲಿಸಬೇಕಾಗುತ್ತದೆ. ಉಚಿತವಾಗಿ ದೊರೆಯುವ ಚಿತ್ರಗಳ
ಸಂಖ್ಯೆಯು ವಿರಳವಾಗಿದೆ. ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನೆಗಾಗಿ ಮತ್ತು ಕಲಿಕೆಗಾಗಿ ನಮ್ಮ
ಸುತ್ತಮುತ್ತಲಿನ ಪರಿಸರದಲ್ಲಿ ಲಭ್ಯವಾಗಬಲ್ಲ ಚಿತ್ರಗಳನ್ನು ಕಲೆ ಹಾಕಿ, ನನ್ನ ಬ್ಲಾಗ್ ನಲ್ಲಿ
ಉಚಿತವಾಗಿ ದೊರೆಯುವಂತೆ ಮಾಡಿದ್ದೇನೆ. ಈ ಚಿತ್ರಗಳನ್ನು ಪಡೆಯಲು ಯಾವುದೇ ಹಕ್ಕುಸ್ವಾಮ್ಯಗಳನ್ನು
ವಿಧಿಸಿರುವುದಿಲ್ಲ. ಈ ಕಾರ್ಯಕ್ಕೆ ಸಮಾಜದಿಂದ ಉತ್ತಮ ಬೆಂಬಲವು ದೊರೆತಿದ್ದು, ವಿದ್ಯಾರ್ಥಿಗಳು,
ಸ್ನೇಹಿತರು, ಸಹೋದ್ಯೋಗಿ ಮಿತ್ರರು ತಾವು ಕ್ಲಿಕ್ಕಿಸಿದ ಫೋಟೋಗಳನ್ನು ನನ್ನೊಡನೆ
ಹಂಚಿಕೊಳ್ಳುತ್ತಿದ್ದಾರೆ.
IDEA - 10
ರಾಸ್ಪ್ ಬೆರ್ರಿ ಸಾಧನದೊಂದಿಗೆ ತಂತ್ರಜ್ಞಾನ ಪ್ರಯೋಗಾಲಯ
ಶಾಲೆಯಲ್ಲಿ ಕಂಪ್ಯೂಟರ್ ಗಳ ಲಭ್ಯತೆಯಿಲ್ಲದಿರುವ ಕಾರಣದಿಂದ ರಾಸ್ಪ್ ಬೆರ್ರಿ ಸಾಧನಗಳ ಸಹಾಯದಿಂದ ವಿದ್ಯಾರ್ಥಿಗಳಿಗಾಗಿ ಪ್ರಯೋಗಾಲಯವನ್ನು ಸೃಷ್ಠಿಸಲಾಗಿದೆ. ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನ್ನ ಹಲವು ಇಂಜಿನಿಯರ್ ಸ್ನೇಹಿತರ ಸಹಕಾರದಿಂದಾಗಿ ಈ ಸಾಧನದ ಪರಿಚಯವನ್ನು ಮಾಡಿಕೊಂಡು, ಇದರ ಮೂಲಕ ವಿದ್ಯಾರ್ಥಿಗಳ ತಂತ್ರಜ್ಞಾನ ಕಲಿಕೆಗಾಗಿ ಒತ್ತು ನೀಡಿದಂತಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಎಂ ಎಸ್ ಆಫೀಸ್, ಕೋಡಿಂಗ್, ಸಿಮ್ಯುಲೇಶನ್ ಮತ್ತು ಇತರೆ ಹಲವಾರು ತಂತ್ರಜ್ಞಾನಗಳನ್ನು ಕಲಿಯುತ್ತಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ವೃತ್ತಿಪರ ಕೋರ್ಸ್ ಗಳನ್ನು ತೆಗೆದುಕೊಳ್ಳಲು ಪ್ರೇರಣೆಯಾಗುತ್ತಿದೆ. ಈ ಬಗೆಯ ತಂತ್ರಜ್ಞಾನವನ್ನು ಇತರೆ ಶಾಲೆಯ ಶಿಕ್ಷಕರು ಉಪಯೋಗಿಸಿಕೊಳ್ಳಲೆಂದು ರಾಜ್ಯಾದ್ಯಂತ ಇದರ ಪ್ರಾತ್ಯಕ್ಷಿಕೆಯನ್ನು ನೀಡುತ್ತಿದ್ದೇನೆ.
IDEA - 9
ಸ್ವ-ಕಲಿಕೆಗಾಗಿ ಯೂಟ್ಯೂಬ್ ಚಾನಲ್
2012ನೇ ಇಸವಿಯಲ್ಲಿ ಒಂದು ಸಣ್ಣ ವೀಡಿಯೋ ಅಪ್ ಲೋಡ್ ಗಾಗಿ ರೂಪಿತವಾದ ಯೂಟ್ಯೂಬ್ ಚಾನಲ್ (hardeepmysore) ನನ್ನದಾಗಿದೆ. ಇಲಾಖೆಯ ಒಂದು ತರಬೇತಿಯಲ್ಲಿ ಒಂದು ಸದುದ್ದೇಶಕ್ಕಾಗಿ ಆರಂಭಗೊಂಡ ನನ್ನ ಈ ಚಾನಲ್ ಇಂದು ನೂರಾರು ಶಾಲಾಪಠ್ಯ ಆಧಾರಿತ ವೀಡಿಯೋಗಳನ್ನು ಒಳಗೊಂಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಗೆ ದಾರಿದೀಪವಾಗಿ ರೂಪುಗೊಂಡಿರುವುದು ವೈಯಕ್ತಿಕವಾಗಿ ಸಂತಸದ ವಿಚಾರವಾಗಿದೆ. ಮುಖ್ಯವಾಗಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ಆಧಾರಿತ ವೀಡಿಯೋಗಳನ್ನು ರಚಿಸಿ, ವಿದ್ಯಾರ್ಥಿ ಮತ್ತು ಶಿಕ್ಷಕರಿಗಾಗಿ ಬಿತ್ತರಿಸುತ್ತಿದ್ದೇನೆ. ಅನುಮಾನ ಪರಿಹಾರಕ್ಕಾಗಿ ಕೇಳುವ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಉತ್ತರಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ಪ್ರಮುಖವಾಗಿ ನಮ್ಮ ಪ್ರಾದೇಶಿಕ/ಮಾತೃ ಭಾಷೆಯಾದ ಕನ್ನಡದಲ್ಲಿ ವೀಡಿಯೋಗಳನ್ನು ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ರಚಿಸಲಾಗುತ್ತಿದೆ. ವೀಡಿಯೋಗಳ ವೀಕ್ಷಣೆಗಾಗಿ ಈ ಕ್ಯೂ.ಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಿ. ಆಂಗ್ಲ ಮಾಧ್ಯಮದ ಸಂಪನ್ಮೂಲಗಳಿಗಾಗಿ ಬೇಡಿಕೆ ಹೆಚ್ಚಿದ್ದರಿಂದ ಹೊಸದಾಗಿ ರಚಿಸುತ್ತಿರುವ ಎಲ್ಲಾ ವೀಡಿಯೋಗಳನ್ನು ದ್ವಿ-ಭಾಷೆಗಳಲ್ಲಿ ರಚಿಸಲು ಪ್ರಾರಂಭಿಸಿದ್ದೇನೆ. ಈ ಚಾನಲ್ ಗೆ ಇಂದು 10 ಸಾವಿರಕ್ಕೂ ಹೆಚ್ಚಿನ ಸಬ್ ಸ್ಕ್ರೈಬರ್ ಗಳಿದ್ದಾರೆ.
IDEA - 8
ಡಿಜಿಟಲ್ ಮಾದರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ
ಶಾಲಾ ಹಂತದಲ್ಲಿ ಜರುಗುವ ಕಾರ್ಯಕ್ರಮಗಳಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ರಾಷ್ಟ್ರೀಯ ಗಣಿತ ದಿನಾಚರಣೆ, ಪರಿಸರ ದಿನಾಚರಣೆ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಅಂಗವಾಗಿ ನಡೆಸುವ ರಸಪ್ರಶ್ನೆಯನ್ನು ಡಿಜಿಟಲ್ ಮೋಡ್ ನಲ್ಲಿ ಪ್ರಸ್ತುತಪಡಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ನನ್ನ ಈ ಪಯಣವು ಇಂದು ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ರಸಪ್ರಶ್ನೆಯನ್ನು ನಡೆಸಿಕೊಡುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದೆ. ಸುವರ್ಣ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ರಸಪ್ರಶ್ನೆಯನ್ನು ನಡೆಸಿಕೊಡಲು ಅವಕಾಶಗಳನ್ನು ನೀಡಿ, ಶ್ಲಾಘಿಸಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ರಚಿತವಾಗುವ ಈ ರಸಪ್ರಶ್ನೆಯಲ್ಲಿ ಸಾಂಪ್ರದಾಯಿಕ ರಸಪ್ರಶ್ನೆಯಲ್ಲಿ ಕಂಡುಬರುವ ಸುತ್ತುಗಳಿಗಿಂತ ಭಿನ್ನವಾಗಿ ಹಲವಾರು ವೈವಿಧ್ಯಮಯ ಸುತ್ತುಗಳನ್ನು ಅಳವಡಿಸಿಕೊಳ್ಳಲಾಗಿದೆ.
IDEA - 7
ಡೈಲಿ ನ್ಯೂಸ್ – ಸಾಮಾಜಿಕ ಜಾಲತಾಣಗಳಲ್ಲಿ ಧನಾತ್ಮಕ ಮಾಹಿತಿ ಪ್ರಸರಣೆ
ಸಾಮಾಜಿಕ ಜಾಲತಾಣಗಳಲ್ಲಿ ಧನಾತ್ಮಕ, ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಪಸರಿಸಬೇಕೆಂಬ ಉದ್ದೇಶದಿಂದ ಡೈಲಿನ್ಯೂಸ್ ಎಂಬ ಪ್ರಯತ್ನವನ್ನು ಸತತವಾಗಿ 5 ವರ್ಷಗಳ ಕಾಲ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ಆಧಾರಿತ ಮಾಹಿತಿಗಳನ್ನು ಪ್ರತಿನಿತ್ಯವೂ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದೇನೆ. 1700ಕ್ಕೂ ಹೆಚ್ಚು ಸಂಗತಿಗಳನ್ನು ಪ್ರತಿನಿತ್ಯ ಮುಂಜಾನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಂಚಲಾಗುತ್ತಿದೆ. ದೇಶ-ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಡೈಲಿನ್ಯೂಸ್ ನಿಂದಾಗಿ ಪಡೆದುಕೊಂಡಿದ್ದೇನೆ.
IDEA - 6
ವೈವಿಧ್ಯಮಯ ಬೋಧನಾ-ಕಲಿಕಾ ಸಂಪನ್ಮೂಲಗಳ ತಯಾರಿಕೆ
ಶಿಕ್ಷಕನು ತನ್ನ ಬೋಧನಾನುಸಾರವಾಗಿ ಕಲಿಕಾ-ಬೋಧನಾ ಮಾದರಿಗಳನ್ನು
ತಯಾರಿಸಿಕೊಳ್ಳಬೇಕೆಂಬುದು ನನ್ನ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದ ನಾನು,
ನನ್ನ ಬೋಧನಾ ಶೈಲಿಗೆ ಅನುಗುಣವಾಗಿ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸಿದೆ. ಅಂತಿಮವಾಗಿ 100ಕ್ಕೂ ಹೆಚ್ಚು ಗಣಿತ-ವಿಜ್ಞಾನ
ವಿಷಯಗಳಿಗೆ ಸಂಬಂಧಿಸಿದ ಮಾದರಿಗಳು ಇಂದು ನನ್ನ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳ ಭಾಗವಾಗಿವೆ.
IDEA - 5
ವಿಜ್ಞಾನ-ಗಣಿತ ಪದಬಂಧ
ಶಾಲಾ ಪಠ್ಯವಸ್ತುವಿಗೆ ಸಂಬಂಧಿಸಿದ ವಿಜ್ಞಾನ-ಗಣಿತ ಪದಬಂಧವನ್ನು ರಚಿಸಿ, ಎಲ್ಲಾ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿದ್ಯಾರ್ಥಿಗಳಲ್ಲಿ ಕಲಿಕೆಯ ಹುಮ್ಮಸ್ಸನ್ನು ಹೆಚ್ಚಿಸುವ ಪ್ರಯತ್ನಕ್ಕಾಗಿ ಕೈಗೊಂಡ ಚಟುವಟಿಕೆಯಿದಾಗಿದೆ. ಪದಬಂಧಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಕಲೆಹಾಕಿ, ವಾರಕ್ಕೊಮ್ಮೆ ಅತೀ ಹೆಚ್ಚು ಬಾರಿ ಸರಿ ಉತ್ತರಗಳನ್ನು ನೀಡಿದ ಸ್ಪರ್ಧಿಗೆ ಬಹುಮಾನವನ್ನು ನೀಡಲು ಪ್ರಾರಂಭಿಸಿದೆ. ಈ ಚಟುವಟಿಕೆಯನ್ನು ಗಮನಿಸಿದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರವು ತಮ್ಮ ಕುತೂಹಲಿ ಯೋಜನೆಯಡಿಲ್ಲಿ ಪ್ರಕಟಿಸಲು ಕೋರಿಕೆಯನ್ನು ನೀಡಿದರು. ಅಂದಿನಿಂದ ನಿರಂತರವಾಗಿ ಕುತೂಹಲಿ ಯೋಜನೆಯಡಿಯಲ್ಲಿ ಪ್ರಚಾರವನ್ನು ಪ್ರಾರಂಭಿಸಲಾಯಿತು. ಹೆಚ್ಚಿನ ಮಟ್ಟದಲ್ಲಿ ಪ್ರಚಾರತೆಯನ್ನು ಪಡೆದುಕೊಂಡ ಪದಬಂಧವು ಕರ್ನಾಟಕ ರಾಜ್ಯದ ಪ್ರತಿಷ್ಠಿತ ವರ್ತಮಾನ ಪತ್ರಿಕೆಯಾದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಪ್ರಾರಂಭವಾಯಿತು.
IDEA - 4
ಬೆಳಕು – ಶಿಕ್ಷಕರಿಗಾಗಿ ಡಿಜಿಟಲ್ ಹ್ಯಾಂಡ್ ಬುಕ್
ಭೌತಶಾಸ್ತ್ರ ಬೋಧಿಸುವ ಶಿಕ್ಷಕರಿಗೆ ಆ ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸುವುದೆಂದರೆ ಒಂದು ಸವಾಲು. ವೈಜ್ಞಾನಿಕ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವುದು ಒಂದು ಭಾಗವಾದಲ್ಲಿ, ಮತ್ತೊಂದು ಆಯಾಮದಲ್ಲಿ ಶಿಕ್ಷಕನು ಆ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವುದು ಮತ್ತು ವಿವರಿಸುವುದು ಸವಾಲಾಗಿರುವುದು. ಭೌತಶಾಸ್ತ್ರದ ಪರಿಕಲ್ಪನೆಗಳನ್ನು ಹತ್ತಾರು ವಿಷಯ ಪರಿಣಿತರಿಂದ ಕಲಿತು, ಸುಲಲಿತವಾಗಿ ಅರ್ಥೈಸಿಕೊಳ್ಳಲು ಚಿತ್ರ ಸಮೇತವಾಗಿ ವಿವರಣೆಯನ್ನು ನೀಡುವ ಕೈಪಿಡಿಯನ್ನು ಹೊರತರುವಲ್ಲಿ ನಾನು ಮತ್ತು ನನ್ನ ಸ್ನೇಹಿತರು ಪ್ರಯತ್ನಿಸಿ, ಬೆಳಕು ಎಂಬ ಕೈಪಿಡಿಯನ್ನು ಹೊರತಂದಿದ್ದೇವೆ. ಈ ಕೈಪಿಡಿಯನ್ನು ಡಿಜಿಟಲೀಕರಣಗೊಳಿಸಿ, ಎಲ್ಲಾ ಸಾಮಾಜಿಕ ತಾಣಗಳಲ್ಲೂ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕನಿಗೂ ದೊರೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ.
IDEA - 3
K-ವಿಜ್ಞಾನ: 20 ವಿಜ್ಞಾನ ಲೇಖನಗಳ ವಿನೂತನ ಅನಾವರಣ
ವಿಜ್ಞಾನ ಬೋಧನೆಯಲ್ಲಿ ಕಂಡು ಬರುವ ಅಮೂರ್ತ ಪರಿಕಲ್ಪನೆಗಳನ್ನು ಸರಳೀಕರಿಸಿ, ಸಾಮಾನ್ಯ ಆಡುಭಾಷೆಯಲ್ಲಿ ವಿವರಿಸುವ ಪ್ರಯತ್ನ ನಾನು ಮತ್ತು ನನ್ನ ಸ್ನೇಹಿತರು ಕೈಗೊಂಡೆವು. ಪ್ರಯತ್ನಫಲವಾಗಿ 20 ಲೇಖನಗಳು ಹೊರಬಂದವು. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಬೇಕೆಂದುಕೊಂಡಿದ್ದ ನಮಗೆ ಅಮೇರಿಕದಲ್ಲಿರುವ ಆಶಾ ಫೌಂಡೇಶನ್ ನಮ್ಮ ಲೇಖನಗಳನ್ನು ಕಲೆ ಹಾಕಿ, ಪುಸ್ತಕವಾಗಿ ಹೊರತರುವಲ್ಲಿ ಸಹಾಯಹಸ್ತವನ್ನು ಚಾಚಿದರು. ಅಂತಿಮವಾಗಿ ಸಿದ್ಧವಾದ ಪುಸ್ತಕವೇ K-ವಿಜ್ಞಾನ (ಕನ್ನಡದಲ್ಲಿ ವಿಜ್ಞಾನ). ನಮ್ಮ ಈ ಶ್ರಮಕ್ಕೆ ಪ್ರತಿಫಲವೆಂಬಂತೆ, ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಕಿರಣ್ ಕುಮಾರ್ ರವರಿಂದ ನಮ್ಮ ಪುಸ್ತಕವು ಅನಾವರಣಗೊಂಡಿತು.
IDEA - 2
IDEA - 1
ಆಕಾಶ ವೀಕ್ಷಣೆ ಕಾರ್ಯಕ್ರಮಗಳ ಯೋಜನೆ
ವಿದ್ಯಾರ್ಥಿಗಳಲ್ಲಿ ಮತ್ತು ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವವನ್ನು ಉಂಟುಮಾಡುವ ಸಲುವಾಗಿ ಶಾಲೆಗಳಲ್ಲಿ, ಗ್ರಾಮಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಆಕಾಶ ನೇರ ವೀಕ್ಷಣೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸಾಂದರ್ಭಿಕವಾಗಿ ಸ್ಟೇಲ್ಲೇರಿಯಂ ಎಂಬ ತಂತ್ರಾಂಶವನ್ನು ಬಳಸಿ ಆಕಾಶ ವೀಕ್ಷಣೆಯನ್ನು ತರಗತಿಯ ಕೊಠಡಿಯೊಳಗೆ ನಡೆಸಲಾಗುತ್ತಿದೆ. ಈ ತಂತ್ರಾಂಶದ ಸಹಾಯದಿಂದಾಗಿ ಈ ಹಿಂದೆಯೇ ಪ್ರಕೃತಿಯಲ್ಲಿ ಜರುಗಿದ್ದ ಸೂರ್ಯಗ್ರಹಣ ಮತ್ತು ಇನ್ನಿತರ ವಿದ್ಯಮಾನಗಳನ್ನು ನಮಗೆ ಅಗತ್ಯವಿದ್ದ ಸಂದರ್ಭದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈ ಕಾರ್ಯದಲ್ಲಿ ನನ್ನೊಡನೆ ಹಲವಾರು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿರುವುದನ್ನು ಸ್ಮರಿಸಬಹುದು.
No comments:
Post a Comment